ಮಲ್ಲಪ್ಪ, ಬಿ
1835-1907, ಪ್ರಸಿದ್ಧ ಪಂಡಿತರು, ವ್ಯಾಕರಣಶಾಸ್ತ್ರದಲ್ಲಿ ಅಗಾಧ ಪಾಂಡಿತ್ಯವಿದ್ದುದರಿಂದ ವ್ಯಾಕರಣದ ಮಲ್ಲಪ್ಪ ಎಂದೇ ಹೆಸರಾಗಿದ್ದರು. ಹುಟ್ಟಿದ್ದು ಗುಂಡ್ಲುಪೇಟೆಯ ಬೇಗೂರು ಗ್ರಾಮದಲ್ಲಿ. ತಂದೆ ಮಲ್ಲಿಕಾರ್ಜುನಪ್ಪ. ತಾಯಿ ಮಲ್ಲಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಊರಿನಲ್ಲಿಯೇ ನಡೆಯಿತು. ಚಿಕ್ಕವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಇವರು ಮೈಸೂರು ಅರಮನೆಯಲ್ಲಿ ಭಕ್ಷಿಗಳಾಗಿದ್ದ ತಮ್ಮ ಹತ್ತಿರದ ಬಂಧು ಕೆಂಪಣ್ಣನವರ ಆಶ್ರಯದಲ್ಲಿ ಬೆಳೆದು ಅಭಿವೃದ್ಧಿಗೆ ಬಂದರು. ಕನ್ನಡ, ಸಂಸ್ಕøತ, ಇಂಗ್ಲಿಷ್, ಪರ್ಷಿಯನ್ ಭಾಷೆಗಳಲ್ಲಿ ಪಾಂಡಿತ್ಯಗಳಿಸಿಕೊಂಡು ಮೈಸೂರು ಅರಸರ ಕೃಪೆಗೆ ಪಾತ್ರರಾಗಿ ಅರಮನೆಯಲ್ಲಿ ಭಾಷಾಂತರಕಾರರಾಗಿ ನೇಮಕಗೊಂಡರು. ಮೈಸೂರಿನಲ್ಲಿ ಭಾಷೋಜ್ಜೀವಿನೀ ಪಾಠಶಾಲೆ ಆರಂಭವಾದಾಗ ಮಲ್ಲಪ್ಪ ಆ ಶಾಲೆಯ ಮುಖ್ಯೋಪಾಧ್ಯಾಯರಾಗಿ ನೇಮಕಗೊಂಡರು. ಕಿಟ್ಟೆಲ್ ಮತ್ತು ಬಿ.ಎಲ್.ರೈಸ್ ಅವರಿಗೆ ಕನ್ನಡ ಭಾಷೆಗೆ ಸಂಬಂಧಿಸಿದ ಕೆಲಸಗಳಲ್ಲಿ ನೆರವಾದರು.

ಇವರು ಬರೆದ ಶಬ್ದಾದರ್ಶ ಎಂಬ ವ್ಯಾಕರಣ ಹಲವಾರು ವರ್ಷಗಳ ಕಾಲ ಅಂದಿನ ಮೈಸೂರು ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿ ಪಠ್ಯಪುಸ್ತಕವಾಗಿತ್ತು. ನಾಗವರ್ಮನ ಕಾದಂಬರಿ, ಅವನ ಕಾವ್ಯಾವಲೋಕನದ ಅರ್ಥಾಲಂಕಾರ ಪ್ರಕರಣ ಮತ್ತು ಷಡಕ್ಷರಿಯ ರಾಜಶೇಖರ ವಿಲಾಸ ಇವನ್ನು ಪರಿಷ್ಕರಿಸಿ ಪ್ರಕಟಿಸಿದ್ದಾರೆ.

ಮೈಸೂರಿನ ಮರಿಮಲ್ಲಪ್ಪನವರ ಪ್ರೌಢಶಾಲೆ, ವೀರಶೈವ ಸಂಸ್ಕøತ ಪಾಠಶಾಲೆ ಮುಂತಾದ ಹಲವು ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆಗಾಗಿಯೂ ಇವರು ಶ್ರಮಿಸಿದ್ದಾರೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ